logo

 

 


ಸಾಹಿತ್ಯ ›› ಡಿ.ವಿ.ಗುಂಡಪ್ಪ (ಡಿ.ವಿ.ಜಿ)

search_glob

Image

ಸಂಬಂಧಪಟ್ಟ ಲೇಖನಗಳು

ಈಗ ನೋಡುತ್ತಿರುವ ಲೇಖನಕ್ಕೆ ಸಂಬಂಧಿಸಿದ ಉಳಿದ ವಿಷಯಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

ಡಿ.ವಿ.ಗುಂಡಪ್ಪ (ಡಿ.ವಿ.ಜಿ)

 

 

"ಆಧುನಿಕ ಭಾರತೀಯ ಸಾಹಿತ್ಯದ ಒಂದು ಅಶ್ವತ್ಥ ವೃಕ್ಷ " ಎಂಬ ಪ್ರಶಂಸೆಗೆ ಪಾತ್ರರಾದ ಡಿ.ವಿ.ಜಿ ಯವರು ಸಾಹಿತ್ಯ, ಸಂಸ್ಕೃತಿ, ಪತ್ರಿಕೋದ್ಯಮ, ಆಡಳಿತ ಹಾಗೂ ರಾಜಕಾರಣ -ಈ ಎಲ್ಲ ಕ್ಷೇತ್ರಗಳಲ್ಲಿನ ತಮ್ಮ ಅನನ್ಯ ಪ್ರತಿಭೆ ಮತ್ತು ಪರಿಶ್ರಮಗಳ ಮೂಲಕ ಮುಖ್ಯವಾಗಿ ತಾವೇ ಕಟ್ಟಿ ಬೆಳೆಸಿದ ತಮ್ಮ ಗೋಖಲೆ ಸಾರ್ವಜನಿಕ ಸಂಸ್ಥೆ, `ಮಂಕುತಿಮ್ಮನ ಕಗ್ಗ' `ಭಗವದ್ಗೀತಾ ತಾತ್ಪರ್ಯ' ಹಾಗೂ `ಜ್ಞಾಪಕ ಚಿತ್ರಶಾಲೆ' ಸಂಪುಟಗಳ ಮೂಲಕ ಕನ್ನಡವನ್ನು, ಕನ್ನಡಿಗನನ್ನು ಬೆಳೆಸಿದ್ದಾರೆ. ಡಿ ವಿ ಜಿ ಅವರ ವಿದ್ವತ್ತು ಹಾಗೂ ಚಿಂತನೆ ಕಂಡವರು ಅವರು ಒಬ್ಬ ಋಷಿ ಎಂದಿದ್ದಾರೆ. ಅವರ ಸಾಹಿತ್ಯ ಬಾಳಿಗೊಂದು ನಂಬಿಕೆಯನ್ನೂ, ಭರವಸೆಯನ್ನೂ ಕೊಟ್ಟಿದೆ. ಹಾ.ಮಾ.ನಾಯಕರು "ಡಿ ವಿ ಜಿ ಅವರದು ಸತ್ಯ ಶಿವ ಸೌಂದರ್ಯಗಳು ಸಮಹಿತವಾದ ಸಾಹಿತ್ಯ" ಎಂದಿದ್ದಾರೆ. ಬದುಕು ಬರಹಗಳೆರಡರ ನಡುವೆ ಸಮನ್ವಯ ಸಾಧಿಸಿದ, ಬರೆದಂತೆಯೇ ಬದುಕಿದ ಋಷಿಸದೃಶ ವ್ಯಕ್ತಿತ್ವ ಡಿ.ವಿ.ಜಿಯವರದು.


ಡಿ ವಿ ಜಿ ಅವರು ೧೮೮೭, ಮಾರ್ಚ್ ೧೭ ರಂದು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ದೇವನಹಳ್ಳಿಯಲ್ಲಿ ಜನಿಸಿದರು. ಅವರ ಪೂರ್ವಿಕರು ತಮಿಳುನಾಡಿನ ತಿರುಚಿನಾಪಳ್ಳಿಯ ಕಡೆಯವರು. ಅವರ ತಂದೆ ವೆಂಕಟರಮಣಯ್ಯ, ತಾಯಿ ಅಲಮೇಲಮ್ಮ. ಅವರ ಮುತ್ತಜ್ಜ ಕೋಲಾರ ಜಿಲ್ಲೆಯ ಮುಳಬಾಗಿಲಿಗೆ ವಲಸೆ ಬಂದವರು. ಶೇಕದಾರ ಕುಟುಂಬದ ಗುಂಡಪ್ಪನವರು ೧೮೯೮ ರಲ್ಲಿ ಕನ್ನಡ ಲೋಯರ್ ಸೆಕೆಂಡರಿ ಪರೀಕ್ಷೆಯಲ್ಲಿ ಪಾಸಾದರು. ಖಾಸಗಿಯಾಗಿ ಇಂಗ್ಲಿಷ್, ಸಂಸ್ಕೃತವನ್ನು ಅಭ್ಯಾಸ ಮಾಡಿದರು. ಮುಂದೆ ಸಂಬಂಧಿಕರೊಬ್ಬರ ಸಹಾಯದಿಂದ ಮೈಸೂರಿನ ಮಹಾರಾಜ ಪ್ರೌಢಶಾಲೆಯಲ್ಲಿ ಶಿಕ್ಷಣ ಪಡೆದರು. ಆದರೆ ೧೯೦೫ ರಲ್ಲಿ ಮೆಟ್ರಿಕ್ಯುಲೇಷನ್ ನಲ್ಲಿ ತೇರ್ಗಡೆಯಾಗಲಿಲ್ಲ. ಅಲ್ಲಿಗೆ ಶಾಲಾ ಶಿಕ್ಷಣವನ್ನು ನಿಲ್ಲಿಸಿದರು. ಪ್ರೌಢಶಾಲೆಯಲ್ಲಿ ಓದುವಾಗಲೇ ಗುಂಡಪ್ಪನವರಿಗೆ ಮದುವೆಯಾಯಿತು. ಹೆಂಡತಿ ಭಾಗೀರಥಮ್ಮ. ಮುಂದೆ ಮುಳಬಾಗಿಲಿನ ಒಂದು ಶಾಲೆಯಲ್ಲಿ ಬದಲಿ ಅಧ್ಯಾಪಕರಾಗಿ ಕೆಲ ಕಾಲ ಕೆಲಸ ಮಾಡಿದರು. ಅದೇ ಅವರ ವೃತ್ತಿ ಜೀವನದ ನಾಂದಿ. ಆದರೂ ಅಲ್ಲಿರಲಾಗಲಿಲ್ಲ. ವೃತ್ತಿ ಬಿಟ್ಟು ಮುಂದೆ ಕೋಲಾರದ ಚಿನ್ನದ ಗಣಿಯಲ್ಲಿ, ಸೋಡಾ ಫ್ಯಾಕ್ಟರಿಯಲ್ಲಿ, ಕೆಲಸ ಮಾಡಿದರು. ನಂತರ ಬೆಂಗಳೂರಿಗೆ ಬಂದು ಕೆಲಸಕ್ಕಾಗಿ ಎಲ್ಲೆಂದರಲ್ಲಿ ಅಲೆದರು. ನಂತರ ಒಂದು ಜಟಕಾ ಗಾಡಿಗೆ ಬಣ್ಣ ಬಳಿಯುವ ಒಂದು ಸಣ್ಣ ಫ್ಯಾಕ್ಟರಿಯಲ್ಲಿ ಕೆಲಸಕ್ಕೆ ಸೇರಿಕೊಂಡರು. ಕೆಲವು ದಿನದಲ್ಲಿ ಆ ಕಾರ್ಖಾನೆಯೂ ಮುಚ್ಚಿ ಹೋಯಿತು.


ಡಿ.ವಿ.ಜಿ ಯವರಿಗೆ ಆಗ ವಯಸ್ಸು ಹದಿನೇಳು. ಅಷ್ಟು ಚಿಕ್ಕ ವಯಸ್ಸಿಗೇ ಅವರು ಇಂಗ್ಲೀಷ್ ನಲ್ಲಿ ನಿರರ್ಗಳ ವಾಗಿ ಮಾತನಾಡುತ್ತಿದ್ದರು, ಬರೆಯುತ್ತಿದ್ದರು.ಜೀವನ ನಿರ್ವಹಣೆಗಾಗಿ ಏನಾದರೂ ಮಾಡಬೇಕಿದ್ದ ಗುಂಡಪ್ಪನವರು "ಸೂರ್ಯೋದಯ ಪ್ರಕಾಶಿಕ" ಪತ್ರಿಕೆಯಲ್ಲಿ ಬಾತ್ಮೀದಾರರಾಗಿ ಸೇರಿಕೊಂಡರು. ಹೆಚ್ಚು ಕಾಲ ಈ ಪತ್ರಿಕೆ ನಡೆಯಲಿಲ್ಲ.ಈವನಿಂಗ್ ಮೈಲ್,ಮೈಸೂರು ಸ್ಟಾಂಡರ್ಡ್ ಮುಂತಾದ ಪತ್ರಿಕೆಗಳಿಗೆ ಇಂಗ್ಲೀಷ್ ಮತ್ತು ಕನ್ನಡದಲ್ಲಿ ಲೇಖನಗಳನ್ನು ಬರೆಯಲು ಪ್ರಾರಂಭಿಸಿದರು. "ವೀರಕೇಸರಿ" ಯಲ್ಲಿ ಕಾರ್ಯ ನಿರ್ವಹಿಸಲು ಮದ್ರಾಸ್ ಗೆ ಹೋದಾಗ ಅಲ್ಲಿ "ಹಿಂದೂ" ಪತ್ರಿಕೆಗೆ ಬರೆದರು. ನಂತರ "ಮೈಸೂರು ಟೈಮ್ಸ್" ಇಂಗ್ಲಿಷ್ ಪತ್ರಿಕೆಯ ಸಹಾಯಕ ಸಂಪಾದಕರಾದರು. ನವರತ್ನ ಕೃಷ್ಣಸ್ವಾಮಿ ಎಂಬ ಸ್ನೇಹಿತರ ಜತೆ ಸೇರಿ ಕನ್ನಡದ ಮೊದಲ ದಿನಪತ್ರಿಕೆ "ಭಾರತಿ" ಯನ್ನು ಆರಂಭಿಸಿದಾಗ ಡಿ.ವಿ.ಜಿ ಯವರ ವಯಸ್ಸು ಕೇವಲ ಹದಿನೆಂಟು. ಮುಂದೆ ವೃತ್ತಪತ್ರಿಕೆಗಳಿಗೆ ಮಾರಕವಾದ ಕಾನೂನೊಂದನ್ನು ಸರ್ಕಾರ ಜಾರಿಗೆ ತಂದಾಗ ಅದನ್ನು ಪ್ರತಿಭಟಿಸಿ ಡಿ.ವಿ.ಜಿ ತಮ್ಮ ಭಾರತಿ ಪತ್ರಿಕೆಯನ್ನು ನಿಲ್ಲಿಸಿಬಿಟ್ಟರು.


ದಿವಾನ್ ರಂಗಾಚಾರ್ಯ ಅವರ ಬಗ್ಗೆ ಇಂಗ್ಲಿಷ್ ನಲ್ಲಿ ಬರೆದ ಲೇಖನ ಡಿ ವಿ ಜಿ ಅವರ ಬದುಕಲ್ಲಿ ಹೊಸ ತಿರುವು ಪಡೆಯಿತು. ಮುಂದೆ ಪುಸ್ತಕ ರೂಪಕ್ಕೆ ತರಲು ಹಲವು ಮಾರ್ಪಾಡು ಮಾಡಿದರು. ಇದು "ದಿವಾನ್ ರಂಗಾಚಾರ್ಲು" ಎಂಬ ಪುಸ್ತಕವಾಗಿ ಪ್ರಕಟವಾಗುತ್ತಿದ್ದಂತೆ ಡಿ.ವಿ.ಜಿ ಯವರಿಗೆ ಅಪಾರ ಖ್ಯಾತಿಯನ್ನು ತಂದುಕೊಟ್ಟಿತು.ಆಗ ಡಿ.ವಿ.ಜಿ ಯವರ ವಯಸ್ಸು ಕೇವಲ ಇಪ್ಪತ್ತೆರಡು. ಆಗ ಮುಖ್ಯ ಇಂಜಿನಿಯರ್ ಆಗಿದ್ದ ಸರ್ ಎಂ.ವಿಶ್ವೇಶ್ವರಯ್ಯನವರು ಈ ಪುಸ್ತಕ ಓದಿ ತುಂಬಾ ಮೆಚ್ಚಿಕೊಂಡರು. ನಂತರ ಲೇಖನ, ಪರಿಚಯದ ಜೊತೆ ಕಾವ್ಯ ಕೃಷಿ ಪ್ರಧಾನವಾಯಿತು. ಅನುವಾದ ಸಾಹಿತ್ಯದ ಮೂಲಕ ಡಿ ವಿ ಜಿ ಉತ್ತಮ ಹೆಸರು ಪಡೆದರು. ರಾಜಕೀಯ ವಿಶ್ಲೇಷಣೆ, ತತ್ತ್ವಶಾಸ್ತ್ರ, ಧಾರ್ಮಿಕ ವಿಚಾರಗಳು, ಪ್ರಬಂಧ ಬರಹ, ಬೇರೆ ಬೇರೆ ಮಗ್ಗಲುಗಳಾದವು.


ಡಿ.ವಿ.ಜಿ "ಕರ್ನಾಟಕ" ಎಂಬ ಇಂಗ್ಲೀಷ್ ಪತ್ರಿಕೆಯೊಂದನ್ನು ಆರಂಭಿಸಿದರು. ಪತ್ರಿಕೆ ಆರಂಭಿಸಲು ಅನುಮತಿ ಕೋರಿದಾಗ ಬೆಂಗಳೂರಿನ ಡೆಪ್ಯುಟಿ ಕಮೀಷನರ್ ಇವರ ವಯಸ್ಸಿನ ಕಾರಣ ನೀಡಿ ಅನುಮತಿ ನೀಡಲು ನಿರಾಕರಿಸಿದರು. ಆದರೆ ಡಿ.ವಿ.ಜಿ ಯವರ ಸಾಮರ್ಥ್ಯ ಅರಿತಿದ್ದ ದಿವಾನ್ ಸರ್. ಎಂ.ವಿಶ್ವೇಶ್ವರಯ್ಯನವರೇ ವಿರೋಧವನ್ನು ಬದಿಗೆ ತಳ್ಳಿ ಡಿ.ವಿ.ಜಿ ಪತ್ರಿಕೆ ಆರಂಭಿಸಲು ಅನುಮತಿ ಕೊಟ್ಟರು. ಪತ್ರಿಕೆ ಬಹುಬೇಗ ಪ್ರಸಿದ್ಧವಾಯಿತು.ಪ್ರಾಮಾಣಿಕ ವರದಿಗೆ, ನಿಷ್ಪಕ್ಷಪಾತ ದೃಷ್ಟಿಗೆ, ಗಂಭೀರ ವರದಿಗೆ ಹೆಸರಾಯಿತು. ಇವಿಷ್ಟೇ ಅಲ್ಲದೆ ಡಿ.ವಿ.ಜಿ "ಇಂಡಿಯನ್ ರೆವ್ಯೂ ಆಪ್ ರೆವ್ಯೂಸ್" ಎಂಬ ಪತ್ರಿಕೆ ಹೊರಡಿಸಿದರು. "ಕರ್ನಾಟಕ ಜನಜೀವನ" ಮತ್ತು "ಅರ್ಥಸಾಧಕ" ಪತ್ರಿಕೆಯನ್ನು ಆರಂಭಿಸಿದರು. ಅವರ "ವೃತ್ತಪತ್ರಿಕೆಗಳು" ಎಂಬ ಪುಸ್ತಕ ಪತ್ರಿಕೋದ್ಯಮಕ್ಕೆ ಸಂಬಂಧಿಸಿದ ಅದ್ವಿತೀಯ ಮಾರ್ಗದರ್ಶಿ. ಡಿ.ವಿ.ಜಿ ಪತ್ರಿಕಾ ಕ್ಷೇತ್ರದಲ್ಲಿ ಸಾಧಿಸಿದ ಮಹತ್ ಕಾರ್ಯಗಳ ಬಗ್ಗೆ ಗೌರವ ಸೂಚಿಸುವ ಸಲುವಾಗಿ ೧೯೨೮ ರಲ್ಲಿ ಬಾಗಲಕೋಟೆಯಲ್ಲಿ ನಡೆದ ಪತ್ರಕರ್ತರ ಮೊದಲ ಸಮ್ಮೇಳನದ ಅಧ್ಯಕ್ಷರನ್ನಾಗಿ ಆರಿಸಿ ಅವರನ್ನು ಗೌರವಿಸಲಾಯಿತು.


"ಸಾರ್ವಜನಿಕ ಜೀವನ ಆಧ್ಯಾತ್ಮಿಕವಾಗಿರಬೇಕು. ಅದಕ್ಕೆ ನಾವು ಪ್ರತಿಫಲವನ್ನು ಅಪೇಕ್ಷಿಸಬಾರದು" ಇದು ಡಿ.ವಿ.ಜಿ ಯವರು ನಂಬಿದ, ಬಾಳಿ ಬದುಕಿದ ಉತ್ಕೃಷ್ಟ ಚಿಂತನೆ, ಜೀವನಶೈಲಿ. ಸಾರ್ವಜನಿಕ ಕಾರ್ಯಕ್ಕಾಗಿ ಅವರಿಂದ ಪಡೆದ ಸಲಹೆಗೆ ಪ್ರತಿಫಲವಾಗಿ ಸರ್.ಎಂ.ವಿಶ್ವೇಶ್ವರಯ್ಯನವರು ನೀಡಿದ ೧೫ಕ್ಕೂ ಹೆಚ್ಚು ಚೆಕ್ಕುಗಳನ್ನು ಡಿ.ವಿ.ಜಿ ಬ್ಯಾಂಕಿಗೆ ಕಳಿಸದೆ ಹಾಗೇ ಇಟ್ಟುಬಿಟ್ಟರು. ಅವರಿಗೆ ಮಾಡಿಕೊಟ್ಟ ಕೆಲಸ ನಾಡಿನ ಜನದ ಕೆಲಸ. ಅದಕ್ಕೆ ಹಣ ತೆಗೆದುಕೊಳ್ಳುವುದೇ? ಕೂಡದು ಎಂಬುದು ಅವರ ಅಭಿಪ್ರಾಯವಾಗಿತ್ತು. ಮುಂದೆ ೧೯೭೦ ರಲ್ಲಿ ಕರ್ನಾಟಕದ ಜನತೆ ಡಿ.ವಿ.ಜಿ ಯವರಿಗೆ ದೊಡ್ಡ ಸಾರ್ವಜನಿಕ ಸನ್ಮಾನ ಏರ್ಪಡಿಸಿ ಒಂದು ಲಕ್ಷ ರೂಪಾಯಿ ಅರ್ಪಿಸಿದಾಗ ಅವರು ಅದನ್ನು ಕೈಯಲ್ಲೂ ಮುಟ್ಟಲಿಲ್ಲ. ಅಲ್ಲೇ ಗೋಖಲೆ ಸಾರ್ವಜನಿಕ ಸಂಸ್ಥೆಗೆ ಅರ್ಪಿಸಿಬಿಟ್ಟರು. ಅವರಿಗೆ ದೊರೆತ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಯ ಹಣವೂ ಅದೇ ಹಾದಿ ಹಿಡಿಯಿತು. ರಾಜ್ಯ ಸರ್ಕಾರ ಅವರ ಕಡೆಯ ದಿನಗಳಲ್ಲಿ ಅವರ ಕಷ್ಟದ ಬದುಕನ್ನು ಕಂಡು ಗೌರವ ಮಾಸಾಶನ ನೀಡುವ ನಿರ್ಧಾರಕ್ಕೆ ಬಂದಾಗಲೂ ಡಿ.ವಿ.ಜಿ ಅದನ್ನು ವಿರೋಧಿಸಿ ಜನರ ಹಣಾವನ್ನು, ಸರ್ಕಾರದ ಹಣವನ್ನು ಹಾಗೆಲ್ಲಾ ಪೋಲು ಮಾಡಬಾರದು ಎಂದು ವಿರೋಧಿಸಿಬಿಟ್ಟರು.
ಗುಂಡಪ್ಪನವರು ಕನ್ನಡದಲ್ಲಿ ಬರೆದ ಕೃತಿಗಳ ಸಂಖ್ಯೆ ಐವತ್ತಕ್ಕೂ ಮೀರಿದೆ. ಕಾವ್ಯ, ಸಾಹಿತ್ಯ ಮೀಮಾಂಸೆ, ಜೀವನ ಚರಿತ್ರೆ, ಸ್ಮೃತಿಚಿತ್ರ, ಅನುವಾದ, ಧರ್ಮಜಿಜ್ನಾಸೆ, ಮಕ್ಕಳ ಸಾಹಿತ್ಯ, ರಾಜ್ಯಶಾಸ್ತ್ರ ಹೀಗೆ ಹಲವಾರು ದಿಕ್ಕುಗಳಲ್ಲಿ ಅವರ ಬರಹ ಹರಡಿದೆ. ಇಂಗ್ಲೀಷಿನಲ್ಲೂ ಅವರು ಹೊರತಂದ ಕೃತಿಗಳು ಮೂವತ್ತಕ್ಕಿಂತಲೂ ಹೆಚ್ಚಾಗಿವೆ.


ಕನ್ನಡ ಕಾವ್ಯಕ್ಷೇತ್ರದಲ್ಲಿ "ಮಂಕುತಿಮ್ಮನ ಕಗ್ಗ" ಹಾಗೂ "ಮರುಳ ಮುನಿಯನ ಕಗ್ಗ" ದ ಮೂಲಕ ಡಿ ವಿ ಜಿ ಮನೆಯ ಮಾತಾದವರು:
"ಬದುಕು ಜಟಕಾಬಂಡಿ, ವಿಧಿಯದರ ಸಾಹೇಬ |
ಕುದುರೆ ನೀನ್, ಅವನು ಪೇಳ್ದಂತೆ ಪಯಣಿಗರು ||
ಮದುವೆಗೋ ಮಸಣಕೋ ಹೋಗೆಂದ ಕಡೆಗೋಡು |
ಪದ ಕುಸಿಯೆ ನೆಲವಿಹುದು -- ಮಂಕುತಿಮ್ಮ ||"


ಈ ಕೃತಿ ಕನ್ನಡದ ಭಗವದ್ಗೀತೆಯೆಂದೇ ಹಲವರು ಭಾವಿಸುವಂತಹ ಉತ್ಕೃಷ್ಟ ಸಂಕಲನ. "ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಬಗು" ಎಂದ ಡಿ ವಿ ಜಿ, ಕವಿ ಪರಂಪರೆ ಹಾಗೂ ವಿಜ್ಞಾನ ನಂಬಿಕೆಗೆ ಕೊಂಡಿ ಬೆಸೆದವರು. ಹಳೆಯದನ್ನು ಬಿಡಲಾರದ ಹೊಸತು ವಿಜ್ಞಾನ ಸೃಷ್ಟೀಕರಿಸಲಾಗದ ಭಾರತೀಯ ಮನಸ್ಸುಗಳನ್ನು ಒಂದಾಗಿಸುವ ವಿಚಾರಲಹರಿಯನ್ನು ಕಾವ್ಯ ಮುಖೇನ ನೀಡಿದ ಡಿ ವಿ ಜಿ ಪತ್ರಕರ್ತರಾಗಿಯೂ ಹೆಸರಾದವರು. ವ್ಯಕ್ತಿ ವಿಚಾರದ ಬರಹಗಳಿಂದ ನಾಲ್ಕು ಕಾಲ ನೆನಪಲ್ಲಿರುವವರು. ಹೀಗಾಗಿ ಅವರ "ಮಹನೀಯರು", "ಜ್ಞಾಪಕ ಚಿತ್ರಶಾಲೆ" ಮಹತ್ವದ ವಿಚಾರಗಳನ್ನು ಹೊರಚೆಲ್ಲಿದ ಕೃತಿಗಳು.
ಕರ್ನಾಟಕ ಸರ್ಕಾರ ಡಿ ವಿ ಜಿ ಅವರ ಶತಮಾನೋತ್ಸವ ಸಂದರ್ಭದಲ್ಲಿ ಅವರ ಸಮಗ್ರ ಸಾಹಿತ್ಯ ಸಂಪುಟ ಹೊರತರುವ ಯೋಜನೆ ಹಮ್ಮಿಕೊಂಡಿದೆ. ಈ ಪ್ರಕಾರ "ಡಿ ವಿ ಜಿ ಕೃತಿ ಶ್ರೇಣಿ"ಯಲ್ಲಿ ವಿಚಾರ, ವಿಮರ್ಶೆ, ನಾಟಕ, ಶಿಶು ಸಾಹಿತ್ಯ, ಜೀವನ ಚರಿತ್ರೆಗಳು, ಕಾವ್ಯ ೧-೨, ನೆನಪಿನ ಚಿತ್ರಗಳು, ಸಂಕೀರ್ಣ ಹೊರತಂದಿದೆ.


ಕನ್ನಡದ ವಿಜ್ಞಾನ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆ ಕೊಟ್ಟ ಬಿ ಜಿ ಎಲ್ ಸ್ವಾಮಿ, ಡಿ ವಿ ಜಿ ಅವರ ಪುತ್ರರು. ತಮ್ಮ ಜೀವನದ ಬಹುತೇಕ, ಅಂತ್ಯದವರೆಗೂ ಮದರಾಸಿನಲ್ಲೇ ಕಾಲ ಕಳೆದ ಸ್ವಾಮಿ ಕನ್ನಡ ಸಾಹಿತ್ಯ ಕಂಡ ಅಪರೂಪದ ಬರಹಗಾರರು.


ಸಾಹಿತ್ಯಕೃತಿಗಳು:

 

ಕಥನಕವನಗಳು: ಕುಗ್ಗಿದ ಮನಸ್ಸಿಗೆ ಸಾಂತ್ವನ ನೀಡುವಂತಹ ಮಹನ್ನೋತ ಕೃತಿ 'ಮಂಕುತಿಮ್ಮಕಗ್ಗ' ಅಪಾರ ಜನಮನ್ನಣೆ ಗಳಿಸಿತು. ಅದರ ಜೊತೆಗೆ 'ಮರುಳ ಸಿದ್ಧನ ಕಗ್ಗ'ವನ್ನು ಬರೆದರು. ಬಾಳಿಗೊಂದು ನಂಬಿಕೆ, ಸಾಹಿತ್ಯ ಶಕ್ತಿ-ಅನುವಾದಗಳು

 

ಕಾವ್ಯ: ವಸಂತಕುಸುಮಾಂಜಲಿ, ನಿವೇದನೆ.

 

ಕವನ ಸಂಕಲನಗಳು: ಅಂತ:ಪುರ ಗೀತೆಗಳು, ಗೀತಶಾಕುಂತಲಂ. ಇತರ ಕೃತಿಗಳು-ಉಮರನ ಒಸುಗೆ, ಮ್ಯಾಕ್ ಬೆತ್, ಪದ್ಯಾನುವಾದಗಳು


ಪ್ರಬಂಧಗಳು: ಜೀವನ ಸೌಂದರ್ಯ ಮತ್ತು ಸಾಹಿತ್ಯ.

 

ವಿಮರ್ಶಾ ಗ್ರಂಥಗಳು: ಕಾವ್ಯ ಸೌಂದರ್ಯ ಮೀಮಾಂಸೆ, ದೇವರು, ಪುರುಷಸೂಕ್ತ, ಶ್ರೀಮದ್ಭಾಗವದ್ಗೀತಾ ತಾತ್ಪರ್ಯ ಅಥವಾ ಜೀವನ ಧರ್ಮ ಯೋಗ, ಋತು-ಸತ್ಯ-ಧರ್ಮ, ಜ್ಞಾಪಕ ಶಾಲೆ, ಕಲೋಪಾಸಕರು, ಸಂಕೀರ್ಣ ಸ್ಮೃತಿ.

 

ಜೀವನ ಚರಿತ್ರೆ: ಗೋಪಾಲಕೃಷ್ಣ ಗೋಖಲೆ, ವಿದ್ಯಾರಣ್ಯ ವೃತ್ತಾಂತ, ರಂಗಾಚಾರ್ಯಲು.

 

ಇನ್ನಿತರ ಕೃತಿಗಳು: ಬೆಕ್ಕೋಜಿ, ತಿಲೋತ್ತಮೆ, ವೃತ್ತ ಪತ್ರಿಕೆ, ರಾಜ್ಯಾಂಗ ತತ್ವಗಳು, ರಾಜ್ಯ ಕುಟುಂಬ

 

ಡಿ.ವಿ.ಗುಂಡಪ್ಪನವರು ೧೯೩೨ ರಲ್ಲಿ ಮಡಿಕೇರಿಯಲ್ಲಿ ನಡೆದ ೧೮ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷರಾಗಿದ್ದರು.
೧೯೩೫ ರಲ್ಲಿ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ ಸ್ಥಾಪಿಸಿದರು.
೧೯೬೧ ರಲ್ಲಿ ಡಿ ವಿ ಜಿ ಅವರಿಗೆ ಮೈಸೂರು ವಿಶ್ವವಿದ್ಯಾಲಯ ಗೌರವ ಡಿ. ಲಿಟ್. ಪದವಿ ನೀಡಿ ಗೌರವಿಸಿತು. ಇದು ಡಿ ವಿ ಜಿ ಅವರು ಪತ್ರಿಕೋದ್ಯಮ ಹಾಗೂ ಸಾಹಿತ್ಯಕ್ಕೆ ಸಲ್ಲಿಸಿದ ಸೇವೆಗಾಗಿ ಸಂದ ಪುರಸ್ಕಾರ.
೧೯೬೭ ರಲ್ಲಿ ಶ್ರೀಮದ್ಭಗವದ್ಗೀತಾ ತಾತ್ಪರ್ಯ ಎಂಬ ಗ್ರಂಥಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿತು.
೧೯೭೩ ರಲ್ಲಿ ಡಿ ವಿ ಜಿ ಸನ್ಮಾನ ಸಮಿತಿ ಇವರಿಗೆ ಒಂದು ಲಕ್ಷ ರೂಪಾಯಿಗಳ ಗೌರವ ಧನ ಸಮರ್ಪಿಸಿತು. ಇದನ್ನು ತಾವೇ ಸ್ಥಾಪಿಸಿದ ಗೋಖಲೆ ಸಂಸ್ಥೆಗೆ ದಾನ ಮಾಡಿದರು.
೧೯೭೪ ರಲ್ಲಿ ಭಾರತ ಸರ್ಕಾರ "ಪದ್ಮಭೂಷಣ ಪ್ರಶಸ್ತಿ" ನೀಡಿ ಗೌರವಿಸಿತು.
೧೯೭೫ ರ ಅಕ್ಟೋಬರ್ ೭ ರಂದು ಡಿ ವಿ ಜಿ ನಿಧನರಾದರು.


ಪ್ರಶಸ್ತಿ, ಪುರಸ್ಕಾರ, ಬಿರುದು:

೧೯೬೧ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಗೌರವ ಡಿ.ಲಿಟ್ ನೀಡಿತು.
೧೯೬೭ರಲ್ಲಿ ಶ್ರೀಮದ್ಭಾಗವದ್ಗೀತಾ ತಾತ್ಪರ್ಯ ಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿತು.
೧೯೩೬ರಲ್ಲಿ ಮಡಿಕೇರಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.
೧೯೭೪ರಲ್ಲಿ ಪದ್ಮಭೂಷಣ ಪ್ರಶಸ್ತಿ ಲಭಿಸಿತು.

 

ಪರಿಷ್ಕರಿಸಿದವರು: ಡಾ. ಪಿ.ವಿ. ನಾರಾಯಣ


This page was last modified on 25 February 2010 at 10:33.

ಹೆಚ್ಚಿನ ಮಾಹಿತಿಗಾಗಿ ಅಥವಾ ಸಲಹೆಗಳಿಗಾಗಿ ಕೆಳಗಿನ ಈ ಮೇಲ್ ವಿಳಾಸದಲ್ಲಿ /ದೂರವಾಣಿ ಸಂಖ್ಯೆಯ ಮೂಲಕ ನಮ್ಮನ್ನು ಸಂಪರ್ಕಿಸಿ. projectmanager@kanaja.in | +91.80.2203.3297