logo

 

 


ಸಂಸ್ಕೃತಿ ›› ಬಸಪ್ಪ ದಾನಪ್ಪ ಜತ್ತಿ

search_glob

Image

ಸಂಬಂಧಪಟ್ಟ ಲೇಖನಗಳು

ಈಗ ನೋಡುತ್ತಿರುವ ಲೇಖನಕ್ಕೆ ಸಂಬಂಧಿಸಿದ ಉಳಿದ ವಿಷಯಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

ಬಸಪ್ಪ ದಾನಪ್ಪ ಜತ್ತಿ

 

ಹಂಗಾಮಿ ರಾಷ್ಟ್ರಪತಿಯಾಗಿ ಸೇವೆಯ ಅವಧಿ: ೧೧.೦೨.೧೯೭೭ ರಿಂದ ೨೪.೦೭.೧೯೭೭

 

ಕರ್ನಾಟಕದ ಬಿಜಾಪುರ ಜಿಲ್ಲೆಯ ಒಂದು ಬಡ ಗ್ರಾಮೀಣ ಕುಟುಂಬದಲ್ಲಿ ಹುಟ್ಟಿದ ಬಸಪ್ಪ ದಾನಪ್ಪ ಜತ್ತಿಯವರು ಭಾರತದ ಉಪರಾಷ್ಟ್ರಪತಿಯಾಗಿಯೂ, ಕೆಲವು ಕಾಲ ರಾಷ್ಟ್ರಪತಿಯಾಗಿಯೂ ಕೆಲಸ ಮಾಡಿದ್ದು ಒಂದು ಅದ್ಭುತ ಯಶೋಗಾಥೆ. ಬಿ.ಡಿ.ಜತ್ತಿ ಎಂತಲೇ ಖ್ಯಾತರಾದ ಇವರು ೧೯೧೨ರ ಸೆಪ್ಟಂಬರ್ ೧೦ ರಂದು ಸಾವಳಗಿ ಗ್ರಾಮದಲ್ಲಿ ಜನಿಸಿದರು, ಆ ಗ್ರಾಮವು ಅಂದು ಮುಂಬೈ ಪ್ರಾಂತದ ಜಮಖಂಡಿ ಸಂಸ್ಥಾನಕ್ಕೆ ಸೇರಿತ್ತು. ತಂದೆ ದಾನಪ್ಪ, ತಾಯಿ ಭಾಗವ್ವ- ಇಬ್ಬರೂ ಶ್ರಮ ಜೀವಿಗಳು, ದೈವ ಭಕ್ತರು, ಗುರು ಹಿರಿಯರಲ್ಲಿ ಅಪಾರ ಗೌರವುಳ್ಳವರು. ಇವರ ಸದ್ಗುಣಗಳು ಬಸಪ್ಪನವರಿಗೆ ಬಳುವಳಿಕೆಯಾಗಿ ಬಂದವು. ಬಸಪ್ಪ, ಹುಟ್ಟೂರಿನಲ್ಲಿ, ನಂತರ ಜಿಜಾಪುರದಲ್ಲಿ ಪ್ರೌಢಶಾಲೆಯವರೆಗೆ ಶಿಕ್ಷಣ ಮುಗಿಸಿ ೧೯೩೪ರಲ್ಲಿ ಕೊಲ್ಹಾಪುರದ ರಾಜಾರಾಮ ಕಾಲೇಜಿನಲ್ಲಿ ಪದವಿ ಪಡೆದು ಅದೇ ಊರಿನ ಕಾನೂನು ಕಾಲೇಜಿಗೆ ಸೇರಿದರು.
ಬಸಪ್ಪನವರು ೧೦ ವರ್ಷದ ಬಾಲಕನಾಗಿದ್ದಾಗಲೇ ೫ ವರ್ಷದ ಬಾಲಕ ಸಂಗವ್ವಳೊಂದಿಗೆ ವಿವಾಹವಾಯಿತು. ತಂದೆಯ ಮರಣದ ನಂತರ ಕುಟುಂಬ ನಿರ್ವಹಣೆಯ ಹೊಣೆ ತಮ್ಮ ಮೇಲೆ ಬಿದ್ದುದರಿಂದ, ಬಸಪ್ಪನವರು ಕಾನೂನು ಶಿಕ್ಷಣವನ್ನು ಕೈಬಿಟ್ಟು ಸ್ವಗ್ರಾಮಕ್ಕೆ ಮರಳಿದರು. ಕುಟುಂಬದ ಹೊಣೆಯ ಜೊತೆಗೆ ತಮ್ಮ ಹಳ್ಳಿಯ ಸಾರ್ವಜನಿಕ ಸಮಸ್ಯೆಗಳನ್ನು ಬಿಡಿಸುವ ಹೊಣೆಯನ್ನೂ ವಹಿಸಿಕೊಂಡರು.ಗ್ರಾಮ ಪಂಚಾಯಿತಿ ಸ್ಥಾಪಿಸಿ, ಅದರ ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾಗಿ ಮೂರೂವರೆ ವರ್ಷ ಅದನ್ನು ಮುನ್ನಡೆಸಿದರು. ಇದು ಅವರ ಸಮಾಜ ಸೇವಾ ಕಾರ್ಯದ ಮೊದಲ ಹಂತ. ಗಾಂಧೀಜಿಯವರ ಆದರ್ಶಗಳಿಂದ ತುಂಬ ಪ್ರಭಾವಿತರಾಗಿದ್ದ ಬಸಪ್ಪನವರು ರಾಜಕೀಯ ಬೆಳವಣಿಗೆಗಳ ಬಗ್ಗೆ ಸದಾ ಜಾಗರೂಕರಾಗಿರುತ್ತಿದ್ದರು.


ಅರ್ಧಕ್ಕೇ ಕೈಬಿಟ್ಟಿದ್ದ ಕಾನೂನು ಶಿಕ್ಷಣವನ್ನು ಮತ್ತೆ ಮುಂದುವರಿಸಿ, ೧೯೪೦ರಲ್ಲಿ ಮುಂಬೈ ವಿಶ್ವವಿದ್ಯಾಲಯದಿಂದ L.L.B. ಪದವಿ ಗಳಿಸಿ, ಜಮಖಂಡಿಯಲ್ಲಿ ವಕೀಲಿ ವೃತ್ತಿ ಆರಂಭಿಸಿದರು. ಆಗಲೂ ಬಡ ಕಕ್ಷಿದಾರರಿಂದ ಹಣ ಸ್ವೀಕರಿಸದೆ, ಅವರಿಗೆ ನ್ಯಾಯ ಒದಗಿಸುತ್ತಿದ್ದರು.


ಜತ್ತಿಯವರ ದಕ್ಷತೆ, ಬಡವರ ಬಗ್ಗೆ ಕಾಳಜಿ, ಸೇವಾ ಮನೋಧರ್ಮ ಇವುಗಳು ಸ್ವಾಭಾವಿಕವಾಗಿಯೇ ಅವರನ್ನು ಜನಪ್ರಿಯ ನೇತಾರರನ್ನಾಗಿ ರೂಪಿಸಿದವು. "ಭಾರತ ಬಿಟ್ಟು ತೊಲಗಿ" ಆಂದೋಳನದಲ್ಲಿ ಭಾಗವಹಿಸಿದರು. ಜಮಖಂಡಿ ಪುರಸಭೆಯ ಅಧ್ಯಕ್ಷರಾದರು.೧೯೪೫ರಲ್ಲಿ ಜಮಖಂಡಿ ಸಂಸ್ಥಾನದಲ್ಲಿ ಪ್ರಜಾ ಪರಿಷದ್ ಸದಸ್ಯರಾಗಿ ಆಯ್ಕೆಯಾಗಿ ಮಂತ್ರಿಯಾದರು. ಸಂಸ್ಥಾನದ ರಾಜನೊಡನೆ ನಿಕಟ ಸಂಪರ್ಕ ಬೆಳೆಸಿ, ಪ್ರಜಾಪ್ರತಿನಿಧಿ ಸರ್ಕಾರ ಸ್ಥಾಪನೆಗೆ ಕಾರಣರಾದರು. ಅಲ್ಲಿಯವರೆಗೆ ನಡೆದು ಬಂದಿದ್ದ "ದಿವಾನ" ಹುದ್ದೆಯ ಬದಲು, ಪ್ರಜಾಪ್ರತಿನಿಧಿಗಳಿಂದ ಆರಿಸಿ ಬಂದ ಮೂವರು ಮಂತ್ರಿಗಳಲ್ಲಿ ಒಬ್ಬರು "ಮುಖ್ಯಮಂತ್ರಿ" ಯಾಗಬೇಕೆಂದು ತೀರ್ಮಾನಿಸಲಾಯಿತು. ಜತ್ತಿಯವರೇ ಜಮಖಂಡಿ ಸಂಸ್ಥಾನದ ಮೊದಲ ಮುಖ್ಯ ಮಂತ್ರಿ ಆದರು. ಭಾರತ ಸ್ವತಂತ್ರವಾದಾಗ, ತಮ್ಮ ಮುಖ್ಯಮಂತ್ರಿ ಪದವಿಗೆ ಚ್ಯುತಿ ಬರುವುದೆಂದು ತಿಳಿದಿದ್ದರೂ, ದೇಶದ ಹಿತದೃಷ್ಟಿಯಿಂದ ಜಮಖಂಡಿ ಸಂಸ್ಥಾನವನ್ನು ಭಾರತ ಒಕ್ಕೂಟದಲ್ಲಿ ವಿಲೀನಗೊಳಿಸಲು ಶ್ರಮಿಸಿದವರೂ ಜತ್ತಿಯವರೇ.


ಸಾರ್ವಜನಿಕ ರಂಗದಲ್ಲಿ ಜತ್ತಿಯವರು ನಿರ್ವಹಿಸಿದ ಹುದ್ದೆಗಳು ಅನೇಕ. ಸಾಂಗ್ಲಿಯ Development Secretary. ಮುಂಬೈ ಸಂಸತ್ ಕಾರ್ಯದರ್ಶಿ, ಮುಖ್ಯ ಸ್ಕೌಟ್ ಕಮೀಷನರ್-ಇವು ಅಂತಹ ಕೆಲವು ಹುದ್ದೆಗಳು. ಯುವಕರಾಗಿದ್ದಾಗಿನಿಂದಲೂ ಅವರ ಕಾರ್ಯಕ್ಷೇತ್ರವಾಗಿದ್ದ ಜಮಖಂಡಿ. ಪ್ರತಿ ಚುನಾವಣೆಯಲ್ಲೂ ಅವರನ್ನೇ ತನ್ನ ಪ್ರತಿನಿಧಿಯಾಗಿ ಆರಿಸುತ್ತಿತ್ತು. ೧೯೫೨ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆದ್ದ ಜತ್ತಿಯವರು. ಮುಂಬೈ ಸರಕಾರದಲ್ಲಿ ಆರೋಗ್ಯ ಹಾಗೂ ಕಾರ್ಮಿಕ ಶಾಖೆಯ ಉಪಮಂತ್ರಿಯಾದರು. ೧೯೫೬ರ ನವೆಂಬರ್ ೧ರಂದು ಭಾಷಾವಾರು ರಾಜ್ಯಗಳ ರಚನೆಯಾದಾಗ ಜಮಖಂಡಿಯೂ ಸೇರಿದಂತೆ, ಮುಂಬೈಪ್ರಾಂತದ ವ್ಯಾಪ್ತಿಯಲ್ಲಿದ್ದ ಕನ್ನಡ ಭಾಷಾ ಪ್ರದೇಶಗಳು ಅಂದಿನ ಮೈಸೂರು ರಾಜ್ಯದಲ್ಲಿ(ಇಂದಿನ ಕರ್ನಾಟಕ) ವಿಲೀನಗೊಂಡವು.೧೯೫೭ರ ಸಾರ್ವತ್ರಿಕ ಚುನಾವಣೆಯಲ್ಲಿ ವಿಧಾನ ಸಭೆಗೆ ಆಯ್ಕೆಯಾಧ ಜತ್ತಿಯವರು ಮೈಸೂರು ಭೂ ಸುಧಾರಣಾ ಸಮಿತಿಯ ಅಧ್ಯಕ್ಷರಾದರು.೧೯೫೮ರಲ್ಲಿ ಮೈಸೂರಿನ ಮುಖ್ಯಮಂತ್ರಿಯಾದರು. ೧೯೬೨ರ ಸಾರ್ವತ್ರಿಕ ಚುನಾವಣೆಯಲ್ಲಿ ಮತ್ತೆ ವಿಧಾನ ಸಭೆಗೆ ಆಯ್ಕೆಯಾದರು. ಆಗ ನಿಜಲಿಂಗಪ್ಪನವರು ಮುಖ್ಯಮಂತ್ರಿಯಾದರು. ಅಂದಿನ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರೀಯವರ ಸಲಹೆಯ ಮೇರೆಗೆ, ಜತ್ತಿಯವರು ೧೯೬೨ ರಿಂದ ೧೯೬೮ ರವರೆಗಿನ ಅವಧಿಯಲ್ಲಿ ಹಣಕಾಸು ಹಾಗೂ ಆಹಾರ ಶಾಖೆಗಳ ಮಂತ್ರಿಯಾಗಿದ್ದರು.
೧೯೭೪ರಲ್ಲಿ ಉಪರಾಷ್ಟ್ರಪತಿಯಾಗಿ ಆಯ್ಕೆಯಾಗುವ ಮೊದಲು ಪಾಂಡಿಚರಿಯ ಉಪರಾಜ್ಯಪಾಲರು ಮತ್ತು ಒರಿಸ್ಸಾ ರಾಜ್ಯದ ರಾಜ್ಯಪಾಲರು ಆಗಿದ್ದರು. ೧೯೭೪ರ ಆಗಸ್ಟ್ ೩೧ರಂದು ಉಪರಾಷ್ಟ್ರಪತಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಅದೇ ಕಾಲಕ್ಕೆ ಫಕ್ರುದ್ದೀನ್ ಅಲಿ ಅಹಮದ್ ಅವರು ರಾಷ್ಟ್ರಪತಿಯಾದರು.


೧೯೭೭ರ ಫೆಬ್ರವರಿ ೧೧ರಂದು ಫಕ್ರುದ್ದೀನ್ ಅಲಿ ಮಹಮದ್ ಅವರು ಇದ್ದಕ್ಕಿದ್ದಂತೆ ನಿಧನರಾದಾಗ, ಜತ್ತಿಯವರು ಕಾರ್ಯವಾಹಕ ರಾಷ್ಟ್ರಪತಿಯಾಗಿ ನಿಯುಕ್ತರಾಗಿ, ಅದೇ ವರ್ಷದ ಜುಲೈ ೨೪ರವರೆಗೂ, ರಾಷ್ಟ್ರದ ಅತ್ಯುಚ್ಚ ಪದವಿಯ ಹೊಣೆಗಾರಿಕೆಯನ್ನು ನಿರ್ವಹಿಸಿದರು. ಅದೇ ಅವಧಿಯಲ್ಲಿ ೬ನೇ ಲೋಕಸಭೆಯ ಮೊದಲ ಅಧಿವೇಶನವನ್ನು ಉದ್ದೇಶಿಸಿ ರಾಷ್ಟ್ರಪತಿ ಸ್ಥಾನದಿಂದ ಭಾಷಣ ಮಾಡಿದರು. ಉಪರಾಷ್ಟ್ರಪತಿಯಾಗಿ ಅವಧಿ ಮುಗಿದ ಮೇಲೆ, ೧೯೭೯ರ ಆಗಸ್ಟ್ ೩೦ರಂದು ನಿವೃತ್ತರಾಗಿ ಬೆಂಗಳೂರಿನಲ್ಲಿ ನೆಲೆಸಿದರು.


ಗಾಂಧಿ ಟೋಪಿ, ಶುಭ್ರ ಬಿಳಿ ಖಾದಿ ಜುಬ್ಬಾ ಮತ್ತು ಕಚ್ಚೆ ಪಂಚೆ-ಇವು ಜತ್ತಿಯವರ ಸರಳ ಉಡುಪು. ಸದಾ ಗಾಂಭೀರ್ಯವನ್ನು ಸೂಸುವ ಮುಖಭಾವ;ದೈಹಿಕವಾಗಿ ಎತ್ತರದ ವ್ಯಕ್ತಿಯಲ್ಲ; ಆದರೆ ಬೌದ್ಧಿಕವಾಗಿ ತುಂಬ ಎತ್ತರದ ವ್ಯಕ್ತಿ ಜತ್ತಿಯವರು "ಜಟ್ಟಿ"ಯೂ ಹೌದು. ಚಿಕ್ಕಂದಿನಲ್ಲಿ ಗರಡಿ ಮನೆಯಲ್ಲಿ ವ್ಯಾಯಾಮ ಮಾಡಿದ್ದಾರೆ. ಕ್ರೀಡೆಗಳಲ್ಲಿ ಅದರಲ್ಲೂ "ಮಲ್ಲಕಂಭ" ದಲ್ಲಿ ವಿಶೇಷ ಆಸಕ್ತಿ. ಈ ಕ್ರೀಡೆಯಲ್ಲಿ ಅವರು ನಿಷ್ಣಾತರು.


ಭಕ್ತಿಭಂಡಾರಿ ಬಸವಣ್ಣ ಅವರ ಆರಾಧ್ಯದೈವ.ಬಸವಣ್ಣನವರ ಆದರ್ಶಗಳು. ವಿಶೇಷವಾಗಿ ಅವರ ಜಾತ್ಯತೀತ ಸಮಾಜದ ಕಲ್ಪನೆ ಜತ್ತಿಯವರ ಮೇಲೆ ತುಂಬಾ ಪರಿಣಾಮ ಬೀರಿತು. ೧೯೬೭ರಲ್ಲಿ ನಡೆದ ಬಸವಣ್ಣನವರ ೮ನೇ ಶತಮಾನೋತ್ಸವದ ಕಾರ್ಯಕ್ರಮಗಳು, ಬೆಂಗಳೂರಿನಲ್ಲಿ ಬಸವ ಸಮಿತಿಯ ಸ್ಥಾಪನೆ, ಬಸವ ಭವನದ ನಿರ್ಮಾಣ-ಇವೆಲ್ಲಕ್ಕೂ ಜತ್ತಿಯವರ ಸ್ಫೂರ್ತಿ ಮತ್ತು ಕಾರ್ಯಯೋಜನೆಗಳೇ ಕಾರಣ.ಅವರ ಮೇಲೆ ಗಾಢ ಪರಿಣಾಮ ಬೀರಿದ ಮತ್ತೊಬ್ಬ ಮಹಾಪುರುಷ ಶ್ರೀ ಅರವಿಂದರು. ಅವರ ಲೇಖನಗಳಿಂದ ಸ್ಫೂರ್ತಿ ಪಡೆದಿದ್ದ ಜತ್ತಿಯವರಿಗೆ.ಪಾಂಡಿಚೆರಿಯ ಉಪರಾಷ್ಟ್ರಪತಿ ಆದಾಗ ಅರವಿಂದಾಶ್ರಮದ ನಿಕಟ ಸಂಪರ್ಕ ಲಭಿಸಿತು. ಇಂದು ವಿಶ್ವವಿಖ್ಯಾತವಾಗಿರುವ "ಅರೋವಿಲ್" ಸಂಸ್ಥೆಯ ಹುಟ್ಟಿಗೆ ಜತ್ತಿಯವರು ಬಹುಮಟ್ಟಿಗೆ ಕಾರಣರು.


ಮಾತಿಗಿಂತ ಕೆಲಸ ಮುಖ್ಯ ಎನ್ನುವುದು ಜತ್ತಿಯವರ ಧ್ಯೇಯ. ಆದರೆ, ಮಾತು ಅವಶ್ಯಕತೆಯಿದ್ದಾಗ ಮಾತ್ರ ಕನ್ನಡ, ಇಂಗ್ಲಿಷ್, ಮರಾಠಿ, ಹಿಂದಿ ಭಾಷೆಗಳಲ್ಲಿ ನಿರರ್ಗಳವಾಗಿ, ಪರಿಣಾಮಕಾರಿಯಾಗಿ ಮಾತನಾಡಬಲ್ಲರಾಗಿದ್ದರು. ಜತ್ತಿಯವರದು ಯಾವ ಆಡಂಬರವನ್ನೂ ಒಲ್ಲದ, ಸರಳ ಸೌಜನ್ಯದ ವ್ಯಕ್ತಿತ್ವವಾಗಿತ್ತು.

 

ಪರಿಷ್ಕರಿಸಿದವರು: ಪ್ರೊ. ಆರ್.ಎಲ್.ಎಂ. ಪಾಟೀಲ್

 

This page was last modified on 12 April 2010 at 10:33.

ಹೆಚ್ಚಿನ ಮಾಹಿತಿಗಾಗಿ ಅಥವಾ ಸಲಹೆಗಳಿಗಾಗಿ ಕೆಳಗಿನ ಈ ಮೇಲ್ ವಿಳಾಸದಲ್ಲಿ /ದೂರವಾಣಿ ಸಂಖ್ಯೆಯ ಮೂಲಕ ನಮ್ಮನ್ನು ಸಂಪರ್ಕಿಸಿ. projectmanager@kanaja.in | +91.80.2203.3297