logo

 

 


ಸಂಸ್ಕೃತಿ ›› ಆರ್.ವೆಂಕಟರಾಮನ್

search_glob

Image

ಸಂಬಂಧಪಟ್ಟ ಲೇಖನಗಳು

ಈಗ ನೋಡುತ್ತಿರುವ ಲೇಖನಕ್ಕೆ ಸಂಬಂಧಿಸಿದ ಉಳಿದ ವಿಷಯಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

ಆರ್.ವೆಂಕಟರಾಮನ್


ರಾಷ್ಟ್ರಪತಿಯಾಗಿ ಸೇವೆಯ ಅವಧಿ: ೨೫.೦೭.೧೯೮೭ ರಿಂದ ೨೪.೦೭.೧೯೯೨

 

ರಾಮಸ್ವಾಮಿ ವೆಂಕಟರಾಮನ್ ಅವರು ತಾವು ರಾಷ್ಟ್ರಪತಿಗಳಾಗಿದ್ದ ಐದು ವರ್ಷಗಳ ಅನುಭವದ ಸಾರವನ್ನು "My Presidential Years” ಎಂಬ ಪುಸ್ತಕದಲ್ಲಿ ಬರೆಯುತ್ತಾ "ಹುಟ್ಟಿದ ಊರು ರಾಜಮಡಮ್ ಹಳ್ಳಿಯಿಂದ ರಾಷ್ಟ್ರಪತಿ ಭವನದವರೆಗಿನ ಪಯಣ ಸುದೀರ್ಘವಾದದ್ದು. ಏಣಿಯ ಪ್ರತಿಯೊಂದು ಮೆಟ್ಟಿಲನ್ನೂ ಹಂತ ಹಂತವಾಗಿ ಏರಿ, ಈ ಉನ್ನತ ಸ್ಥಾನವನ್ನು ತಲುಪಿದ್ದೇನೆ" ಎಂದು ಹೇಳಿಕೊಂಡಿದ್ದಾರೆ. ಕಾರ್ಮಿಕ ಸಂಘಟನೆಯ ವಕೀಲ, ಅದರ ಅಧ್ಯಕ್ಷ, ಕಾಂಗ್ರೆಸ್ ಸಂಸ್ಥೆಯ ಸಾಮಾನ್ಯ ಕೆಲಸಗಾರ, ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸದಸ್ಯ, ಸಂಯುಕ್ತ ರಾಷ್ಟ್ರ ಸಂಸ್ಥೆಯಲ್ಲಿ ಭಾರತದ ಪ್ರತಿನಿಧಿ, ಅದೇ ಸಂಸ್ಥೆಯ ಆಡಳಿತ ನ್ಯಾಯಮಂಡಳಿಯ (Administarative Tribunal) ಅಧ್ಯಕ್ಷ, ಸಂಸತ್ ಸದಸ್ಯ, ತಮಿಳು ನಾಡು ಹಾಗು ಕೇಂದ್ರ ಸಂಪುಟಗಳಲ್ಲಿ ಮಂತ್ರಿ, ಉಪರಾಷ್ಟ್ರಪತಿ, ರಾಷ್ಟ್ರಪತಿ-ಹೀಗೆ ವೈವಿಧ್ಯಪೂರ್ಣ ಸಾರ್ವಜನಿಕ ಸೇವೆಯ ಅನುಭವ ಅವರದು. ಸಮರ್ಥನ್ಯಾಯವಾದಿ, ಅರ್ಥಿಕರಂಗದ ಅಪಾರ ಜ್ಞಾನವುಳ್ಳವರು, ರಾಜಕೀಯ ಕ್ಷೇತ್ರದ "ಸೂಕ್ಷ್ಮಗಳನ್ನು ಅರಿತವರು. ಆಡಳಿತದಲ್ಲಿ ಸಿದ್ಧಹಸ್ತರು , ನಡೆನುಡಿಯಲ್ಲಿ ವಿನಯ, ಶುದ್ಧಚಾರಿತ್ರ್ಯ, ನ್ಯಾಯಪರತೆ ಇವುಗಳಿಂದ ಎಲ್ಲರ ಪ್ರೀತಿ, ವಿಶ್ವಾಸ, ಗೌರವ ಗಳಿಸಿಕೊಂಡವರು ವೆಂಕಟರಾಮನ್.


೧೯೧೦ರ ಡಿಸೆಂಬರ್ ೪ ರಂದು ತಮಿಳು ನಾಡಿನ ತಂಜಾವೂರ್ ಜಿಲ್ಲೆಯ ರಾಜಮಡಮ್ ಹಳ್ಳಿಯಲ್ಲಿ ವೆಂಕಟರಾಮನ್ ಅವರ ಜನನ. ತಂದೆ ರಾಮಸ್ವಾಮಿ ಅಯ್ಯರ್ ವಕೀಲರು. ಸುಸಂಸ್ಕೃತ ವ್ಯಕ್ತಿ ದೇಶ ಸೇವೆಯ ಮೊದಲ ಪಾಠಗಳು ಕುಟುಂಬದ ಹಿರಿಯರಿಂದಲೇ ವೆಂಕಟರಾಮನ್ ಅವರಿಗೆ ಲಭಿಸಿತ್ತು. ವಿಶ್ವವಿದ್ಯಾಲಯದವರೆಗಿನ ಶಿಕ್ಷಣವನ್ನು ತಮ್ಮ ಜಿಲ್ಲೆಯಲ್ಲಿ ಮುಗಿಸಿ, ಮದರಾಸ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದಲ್ಲಿ ಎಂ.ಎ.ಹಾಗೂ ಕಾನೂನಿನಲ್ಲಿ ಬಿ.ಎಲ್.ಪದವಿಗಳನ್ನು ಪಡೆದರು. ಬ್ರಿಟಿಷ್ ಸರ್ಕಾರದ ಗುಲಾಮನಾಗಲು ಇಷ್ಟವಿಲ್ಲದೆ, ೧೯೩೫ರಲ್ಲಿ ಮದರಾಸ್, ಉಚ್ಚನ್ಯಾಯಲಯದಲ್ಲಿ ವಕೀಲರಾದರು. ೧೯೩೮ರಲ್ಲಿ ಜಾನಕಿದೇವಿ ಅವರೊಂದಿಗೆ ವಿವಾಹವಾಯಿತು. ಮುಂದೆ, ೧೯೫೧ರಲ್ಲಿ ಭಾರತದ ಶ್ರೇಷ್ಠ ನ್ಯಾಯಲಯದಲ್ಲಿ ನ್ಯಾಯವಾದಿಯಾದರ. ವಕೀಲ ವೃತ್ತಿಯನ್ನು ಆರಂಭಿಸಿದ ದಿನಗಳಿಂದಲೂ ಅವರು ತೋರಿದ ಅಸಾಧಾರಣ ಪ್ರತಿಭೆ ಮತ್ತು ಜಾಣ್ಮೆಗಳು ರಾಜಾಜಿಯವರಿಂದಲೂ ಪ್ರಶಂಸೆ ಗಳಿಸಿದ್ದವು.


೧೯೪೨ರ "ಭಾರತ ಬಿಟ್ಟು ತೊಲಗಿ" ಆಂದೋಳನದಲ್ಲಿ ಭಾಗವಹಿಸಿ ಎರಡು ವರ್ಷ ಸೆರೆಮನೆವಾಸ ಅನುಭವಿಸಿದರು. ವಕೀಲ ವೃತ್ತಿ ಆರಂಭಿಸಿದಾಗಿನಿಂದಲೂ ಕಾರ್ಮಿಕರಿಗೆ ಸಂಬಂಧಿಸಿದ ಕಾನೂನುಗಳಲ್ಲಿ ಅವರಿಗೆ ವಿಶೇಷ ಆಸಕ್ತಿ. ಸೆರೆಮನೆಯಿಂದ ಬಿಡುಗಡೆಯಾದ ಕೂಡಲೆ ಅವರು ಮಾಡಿದ ಮೊದಲ ಕೆಲಸ, ತಮಿಳು ನಾಡು ಕಾಂಗ್ರೆಸ್ಸಿನ ಕಾರ್ಮಿಕ ವಿಭಾಗದ ಸಂಘಟನೆ. ಕಾರ್ಮಿಕರ ಉಪಯೋಗಕ್ಕಾಗಿ Labour Law Journal ಎಂಬ ನಿಯತಕಾಲಿಕೆಯನ್ನು ಆರಂಭಿಸಿದರು. ಪ್ಲಾಂಟೇಷನ್, ಎಸ್ಟೇಟ್, ಬಂದರು, ರೈಲ್ವೆ, ಪತ್ರಿಕೋದ್ಯಮ- ಈ ಎಲ್ಲ ಕ್ಷೇತ್ರಗಳ ಕಾರ್ಮಿಕರನ್ನು ಸಂಘಟಿಸುವ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡರು.
೧೯೫೦ರಲ್ಲಿ ತಾತ್ಕಾಲಿಕ ಸಂಸತ್ತಿಗೆ ಆಯ್ಕೆಯಾದ ವೆಂಕಟರಾಮನ್ ಮುಂದೆ ನಾಲ್ಕು ಬಾರಿ ಲೋಕಸಭೆಗೆ ಆಯ್ಕೆಯಾದರು. ಆದರೆ ೧೯೫೭ರಲ್ಲಿ ಮಾತ್ರ ಲೋಕಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ, ತಮಿಳುನಾಡಿ ಸರ್ಕಾರದಲ್ಲಿ ಕೈಗಾರಿಕೆ,ಕಾರ್ಮಿಕ ಶಾಖೆ ಮತ್ತಿತರ ಪ್ರಮುಖ ಖಾತೆಗಳ ಮಂತ್ರಿಯಾಗಿ ದುಡಿದು, ತಮ್ಮ ರಾಜ್ಯವನ್ನು ಒಂದು ಪ್ರಮುಖ ಕೈಗಾರಿಕಾ ಕೇಂದ್ರವಾಗಿ ರೂಪಸಿದರು.


ಕೇಂದ್ರ ಯೋಜನಾ ಆಯೋಗದ ಸದಸ್ಯತ್ವ, ಸಾರ್ವಜನಿಕ ಲೆಕ್ಕಪತ್ರಗಳ ಪರಿಶೀಲನಾ ಸಮಿತಿಯ ಅಧ್ಯಕ್ಷತೆ(Public Accounts Committee), ಕೇಂದ್ರ ಸಂಪುಟದ ರಾಜಕೀಯ ಹಾಗೂ ಆರ್ಥಿಕ ವ್ಯವಹಾರಗಳ ಸಮಿತಿಗಳ ಸದಸ್ಯತ್ವ, International Monetary Fund (IMF),The International Bank of Rconstruction and Development (IBRD) ಮತ್ತು Asian Developmetn Bank (ADB)- ಇವುಗಳ ಗವರ್ನರ್ ಪದವಿ ಇತ್ಯಾದಿ ವೆಂಕಟರಾಮನ್ ನಿವಹಿಸಿದ ಕೆಲವು ಉನ್ನತ ಹುದ್ದೆಗಳು. ೧೯೮೦ರಲ್ಲಿ ಕೆಂದ್ರ ವಿತ್ತಮಂತ್ರಿಯಾಗಿ, ನಂತರ ರಕ್ಷಣಾ ಮಂತ್ರಿಯಾಗಿ ೧೯೮೪ರವರೆಗೆ ಸೇವೆ ಸಲ್ಲಿಸಿದ್ದಾರೆ.
ಅಂತಾರಾಷ್ಟ್ರೀಯ ವ್ಯವಹಾರಗಳಲ್ಲಿ ವೆಂಕಟರಾಮನ್ ಅವರಿಗಿದ್ದ ಅಪಾರ ಜ್ಞಾನದಿಂದ ಲಾಭವನ್ನು ಪಡೆಯಲು, ಅಂದಿನ ಪ್ರಧಾನಿ ನೆಹರೂ ಅವರು, ಸಂಯುಕ್ತ ರಾಷ್ಟ್ರ ಸಂಸ್ಥೆಯಲ್ಲಿ ಭಾರತವನ್ನು ಪ್ರತಿನಿಧಿಸಲು ವೆಂಕಟರಾಮನ್ ಅವರನ್ನು ಆರಿಸಿದ್ದರು.೧೯೫೩ ರಿಂದ ೧೯೬೧ ರ ಅವಧಿಯಲ್ಲಿ ಅವರು ಹಾಗೆ ಏಳು ಬಾರಿ ಪ್ರತಿನಿಧಿಸಿದ್ದಾರೆ.ಅಂತಾರ್ರಾಷ್ಟ್ರೀಯ ಕಾರ್ಮಿಕ ಹಾಗೂ ಸಂಸದೀಯ ಸಮ್ಮೇಳನಗಳಲ್ಲೂ ಭಾರತವನ್ನು ಪ್ರತಿನಿಧಿಸಿದ್ದಾರೆ. ಸಂಯುಕ್ತ ರಾಷ್ಟ್ರಸಂಸ್ಥೆಯ ಆಡಳಿತ ನ್ಯಾಯಮಂಡಳಿಯ(Administrative Tribunal) ಸದಸ್ಯರಾಗಿ, ನಂತರ ಅದರ ಅಧ್ಯಕ್ಷರಾಗಿ ೨೪ ವರ್ಷಗಳ ಕಾಲ ನಿರಂತರವಾಗಿ ಅವರು ಸಲ್ಲಿಸಿದ ಅನನ್ಯ ಸೇವೆಗಾಗಿ, ಆ ಸಂಸ್ಥೆಯ ಅಜೀವ ಅಧ್ಯಕ್ಷ ಪದವಿಯನ್ನು ನೀಡಿ ಅವರನ್ನು ಗೌರವಿಸಲಾಗಿದೆ.


ವೆಂಕಟರಾಮನ್ ೧೯೮೪ರಲ್ಲಿ ಉಪರಾಷ್ಟ್ರಪತಿಯಾಗಿ ಅಧಿಕಾರ ವಹಿಸಿಕೊಂಡರು. ೧೯೮೭ರಲ್ಲಿ ರಾಷ್ಟ್ರಪತಿಯಾಗಿ ಆರಿಸಿದ ಬಂದು ಜುಲೈ ೨೫ರಂದು ಭಾರತದ ಎಂಟನೆಯ ರಾಷ್ಟ್ರಪತಿಯಾಗಿ ಪ್ರಮಾಣವಚನ ಸ್ವೀಕರಿಸಿದರು.ಅವರು ರಾಷ್ಟ್ರಪತಿಯಾಗಿದ್ದಾಗ ಭಾರತದ ರಾಜಕೀಯ ಕ್ಷೇತ್ರದಲ್ಲಿ ಅಲ್ಲೋಲ ಕಲ್ಲೋಲಗಳಾದವು. ಶ್ರೀಲಂಕಾ, "ಬೊಫೋರ್ಸ" ಸಮಸ್ಯೆಗಳು ಹುಟ್ಟಿಕೊಂಡವು. ನಾಲ್ಕು ಬಾರಿ ಪ್ರಧಾನ ಮಂತ್ರಿಗಳು ಬದಲಾದರು. ಪ್ರತಿಯೊಂದು ಸಮಸ್ಯೆಗೂ ಸಂವಿಧಾನದ ಚೌಕಟ್ಟಿನೊಳಗೆ ಪರಿಹಾರವನ್ನು ಕಂಡುಹಿಡಿಯಲು ಯತ್ನಿಸಿದ ಅವರ ನಿಲುವು ಎಲ್ಲರ ಪ್ರಶಂಸೆಯನ್ನೂ ಗಳಿಸಿತು.
ವೆಂಕಟರಾಮನ್ ಅವರಿಗೆ ದೇಶದ ಅನೇಕ ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್ ಪದವಿ ನೀಡಿವೆ.


ಸರ್ಕಾರದ ಬೊಕ್ಕಸಕ್ಕೆ ಅನವಶ್ಯಕ ಖರ್ಚಾಗಬಾರದೆಂದು ತಮ್ಮ ಪ್ರವಾಸಗಳನ್ನು ಕಡಿಮೆ ಮಾಡಿಕೊಂಡರು, ನಿವೃತ್ತರಾಗು ಮೊದಲು ರಾಷ್ಟ್ರಪತಿಗಳು ಕೈಗೊಳ್ಳುತ್ತಿದ್ದ "ಭಾರತ ದರ್ಶನ್" ಹಾಗೂ ರಾಜ್ಯಪಾಲರುಗಳು ರಾಷ್ಟ್ರಪತಿಯನ್ನು ಬೀಳ್ಕೊಡಲು ದಿಲ್ಲಿಗೆ ಕೈಗೊಳ್ಳುತ್ತಿದ್ದ ಪ್ರವಾಸ -ಇವೆರಡನ್ನೂ ನಿಲ್ಲಿಸಿದರು. ತಮ್ಮ ರಕ್ಷಣೆಗಾಗಿ ಮಾಡುವ ಕಡ್ಡಾಯ ವ್ಯವಸ್ಥೆಯಿಂದ ಸಾಮಾನ್ಯ ಜನರಿಗೆ ತೊಂದರೆಯಾಗುತ್ತದೆ ಎಂದು ದಿಲ್ಲಿಯಲ್ಲೂ ಅನವಶ್ಯಕವಾಗಿ ಸಂಚರಿಸುತ್ತಿರಲಿಲ್ಲ. ಹೊರದೇಶಗಳಿಗೆ ಸೌಹಾರ್ದ ಭೇಟಿ ನೀಡಿದಾಗ ತಮಗೆ ಹಾಗೂ ತಮ್ಮ ಪತ್ನಿಗೆ ನೀಡಲಾಗಿದ್ದ ಅಮೂಲ್ಯ ಕಾಣಿಕೆಗಳಿಗೆ ಹಿಂದಿನ ರಾಷ್ಟ್ರಪತಿಗಳಿಗೆ ಬಂದಿದ್ದ ಕಾಣಿಕೆಗಳನ್ನೂ ಸೇರಿಸಿ, ರಾಷ್ಟ್ರಪತಿ ಭವನದಲ್ಲಿ ಸಂಗ್ರಹಾಲಯವನ್ನು ಸ್ಥಾಪಿಸಿದರು. ತಮ್ಮ ಹಳ್ಳಿಯ ಪಿತ್ರಾರ್ಜಿತ ಮನೆಯನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನೀಡಿದರು.


ಶಾಸ್ತ್ರೀಯ ಸಂಗೀತ, ನೃತ್ಯ , ಶಿಲ್ಷ ಮುಂತಾದ ಕಲಾ ಪ್ರಕಾರಗಳಲ್ಲಿ ಅವರಿಗೆ ತುಂಬಾ ಆಸಕ್ತಿ ಚೆಸ್ ,ಬ್ಯಾಡ್‌ಮಿಂಟನ್, ಫುಟ್‌ಬಾಲ್, ಗಾಲ್ಫ್, ಬಿಲಿಯರ್ಡ್ಸ್ ಅವರ ಮೆಚ್ಚಿನ ಕ್ರೀಡೆಗಳು.ರಾಷ್ಟ್ರಪತಿ ಭವನದ ಉದ್ಯಾನವನ್ನು ಸ್ವತಃ ಶ್ರಮವಹಿಸಿ ಅಭಿವೃದ್ಧಿಪಡಿಸಿದ್ದಾರೆ. ಒಂದು ಬಗೆಯ ಸೇವಂತಿಗೆ ಹೂವಿಗೆ ಅವರ ಹೆಸರನ್ನೇ ಇಟ್ಟು ಅಂತರಾಷ್ಟ್ರೀಯ ಸೇವಂತಿಗೆ ಹೂವುಗಳ ಪ್ರದರ್ಶನದಲ್ಲಿ ಇಡಲಾಗಿತ್ತು. ಎರಡನೇ ಬಾರಿ ರಾಷ್ಟ್ರಪತಿ ಸ್ಥಾನಕ್ಕೆ ಸ್ಫರ್ಧಿಸಲು ನಿರಾಕರಿಸುವ ವೆಂಕಟರಾಮನ್ , ೨೭ ವರ್ಷದ ಸಾರ್ವಜನಿಕ ಸೇವೆಯಲ್ಲಿ ನಾನು ಸಾಧಿಸಬಹುದಾದದ್ದನ್ನೆಲ್ಲ ಸಾಧಿಸಿದ್ದೇನೆ. ಈಗ ನಾನು ಸಾಧಿಸಬೇಕಾಗಿರುವುದು, ಭಗವದ್ಗೀತೆಯಲ್ಲಿ ಹೇಳಿರುವಂತೆ "ಸಂತುಷ್ಟಿ" ಎಂದರು. ೧೯೯೨ ಜುಲೈ ೨೪ರಂದು ನಿವೃತ್ತರಾಗಿ ಚೆನ್ನೈಯಲ್ಲಿ ನೆಲೆಸಿದ ಇವರು ೨೭.೦೧.೨೦೦೯ರಂದು ನಿಧನರಾದರು.

 

ಪರಿಷ್ಕರಿಸಿದವರು: ಪ್ರೊ. ಆರ್.ಎಲ್.ಎಂ. ಪಾಟೀಲ್

 

This page was last modified on 12 April 2010 at 10:33.

ಹೆಚ್ಚಿನ ಮಾಹಿತಿಗಾಗಿ ಅಥವಾ ಸಲಹೆಗಳಿಗಾಗಿ ಕೆಳಗಿನ ಈ ಮೇಲ್ ವಿಳಾಸದಲ್ಲಿ /ದೂರವಾಣಿ ಸಂಖ್ಯೆಯ ಮೂಲಕ ನಮ್ಮನ್ನು ಸಂಪರ್ಕಿಸಿ. projectmanager@kanaja.in | +91.80.2203.3297