logo

 

 


ವಿಜ್ಞಾನ ›› ಸಿಗ್ಮಂಡ್ ಫ್ರಾಯ್ಡ್

search_glob

Image

ಸಂಬಂಧಪಟ್ಟ ಲೇಖನಗಳು

ಈಗ ನೋಡುತ್ತಿರುವ ಲೇಖನಕ್ಕೆ ಸಂಬಂಧಿಸಿದ ಉಳಿದ ವಿಷಯಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

ಸಿಗ್ಮಂಡ್ ಫ್ರಾಯ್ಡ್

 

 

(ಕ್ರಿ. ಶ. ೧೮೫೬-೧೯೩೮)
(ಮನೋ ವಿಶ್ಲೇಷಣಾ ವಿಧಾನ)

 

ಯಾವ ಯಾವ ಶಾರೀರಿಕ ರೋಗಗಳಿಗೆ ಯಾವ ಯಾವ ಔಷಧಿಗಳನ್ನು ಕೊಟ್ಟು ಗುಣಪಡಿಸಬೇಕು ಎಂಬ ವಿಷಯವಾಗಿ ಔಷಧ ವಿಜ್ಞಾನ ಕ್ಷೇತ್ರದಲ್ಲಿ ಭಾರೀ ಬದಲಾವಣೆಗಳಾಗುತ್ತಿದ್ದಾಗ ಮಾನಸಿಕ ರೋಗಗಳನ್ನು ಗುಣಪಡಿಸುವ ವಿಷಯದ ಕಡೆಗೆ ಗಮನ ಹರಿಸಿದ ವಿಜ್ಷಾನಿಗಳು ಕಮ್ಮಿ. ನರ ಮಂಡಲ ವ್ಯವಸ್ಥೆ, ಶರೀರದ ಅಂಗಗಳ ರಚನೆ, ಆರೋಗ್ಯಕರ ಶಾರೀರಕ ಸ್ಥಿತಿ ಎಲ್ಲ ಇರುತ್ತದೆ. ಆದರೆ ವ್ಯಕ್ತಿ ಮಾತ್ರ ವಿಚಿತ್ರವಾದ ರೀತಿಯಲ್ಲಿ. ಅಸಹಜವಾಗಿ ವರ್ತಿಸುತ್ತಿರುತ್ತಾನೆ. ಇದನ್ನೇ ಮಾನಸಿಕ ರೋಗ ಎನ್ನುತ್ತಾರೆ. ಈ ರೋಗಗಳಿಗೆ ಪರಿಹಾರ ಕಂಡುಹಿಡಿಯುವತ್ತ ವಿಶೇಷ ಗಮನ ಹರಿಸಿದ ವಿಜ್ಞಾನಿ, ಸಿಗ್ಮಂಡ್ ಫ್ರಾಯ್ಡ್. ಈತ ಮೇ ೬, ೧೮೫೬ರಂದು ಫ್ರೆಯ್ ಬರ್ಗ್ (ಈಗ ಜೆಕೊ ಸ್ಲೋವಾಕಿಯದಲ್ಲಿದೆ) ಎಂಬಲ್ಲಿ ಜನಿಸಿದರು. ಈತ ತನ್ನ ಜೀವಮಾನವನ್ನೆಲ್ಲ ವಿಯೆನ್ನಾದಲ್ಲೇ ಕಳೆದರು.


ವಿದ್ಯಾರ್ಥಿಯಾಗಿದ್ದಾಗ ಫ್ರಾಯ್ಡ್ ಹಲವಾರು ವಿಷಯಗಳನ್ನು ಬದಲಿಸಿಕೊಂಡರು. ಮೊದಲು ರಾಸಾಯನಿಕ ಶಾಸ್ತ್ರದಲ್ಲಿ ಆಸಕ್ತಿ. ಮುಂದೆ ಜೀವಶಾಸ್ತ್ರ ಕಲಿಯಲು ಇಷ್ಟ. ಜೀವಶಾಸ್ತ್ರದಲ್ಲಿ ಕೆಲವು ಸಂಶೋಧನೆಗಳನ್ನು ಮಾಡಿ ಔಷಧ ಶಾಸ್ತ್ರದಲ್ಲಿ ಮನಸ್ಸು ತೊಡಗಿಸಿದರು. ಆಮೇಲೆ ನರರೋಗಶಾಸ್ತ್ರದ ಅಧ್ಯಯನ ಮಾಡಿ ೧೮೮೬ರಲ್ಲಿ ನರರೋಗ ಚಿಕಿತ್ಸಾಲಯವೊಂದನ್ನು ತೆರೆದರು. ಚಿಕಿತ್ಸಾಲಯಕ್ಕೆ ಮಾನಸಿಕ ರೋಗಿಗಳು ಹೆಚ್ಚು ಸಂಖ್ಯೆಯಲ್ಲಿ ಬರತೊಡಗಿದಾಗ ಇವರ ಲಕ್ಷ್ಯ ಮನೋರೋಗ ಚಿಕಿತ್ಸಾ ವಿಧಾನಗಳತ್ತ ಹರಿಯಿತು.


ಮಾನಸಿಕ ರೋಗಿಗಳನ್ನು ಗುಣಪಡಿಸುವ ಹೆಸರಿನಲ್ಲಿ ಅವರಿಗೆ ಹಿಂಸೆ ಕೊಡುತ್ತಿದ್ದ ಮಾಂತ್ರಿಕರ ಕಾಲ ಅದು. ಈ ಸಮಸ್ಯೆಯನ್ನು ಬಗೆಹರಿಸಲು ಫ್ರಾಯ್ಡ್ ಬೇರೆ ಬೇರೆ ಮನೋರೋಗಿಗಳ ಬಗ್ಗೆ ವಿವರಗಳನ್ನು ಸಂಗ್ರಹಿಸಿದರು. ಅಂಥ ರೋಗಿಗಳ ಜತೆ ಸಮಾಧಾನದಿಂದ ವರ್ತಿಸಿ ಅವರನ್ನು ಗುಣಪಡಿಸುವ ವಿಧಾನಗಳನ್ನು ರೂಪಿಸತೊಡಗಿದರು. ಬ್ರಾಯೆರ‍್ ಎಂಬುವರು ಮನೋರೋಗಿಗಳನ್ನು ಗುಣಪಡಿಸಲು ಅನುಸರಿಸುತ್ತಿದ್ದ ಸಮ್ಮೋಹನ ವಿದ್ಯೆಯ (ಹಿಪ್ನಾಟಿಸಂ) ವಿಧಾನ ಇವರ ಗಮನ ಸೆಳೆಯಿತು. ಸಿಗ್ಮಂಡ್ ಫ್ರಾಯ್ಡ್ ಅದರ ಬಗ್ಗೆ ವ್ಯಾಸಂಗ ಮಾಡಿ ಅದಕ್ಕಿಂತ ಪರಿಣಾಮಕಾರಿಯಾದ "ಫ್ರೀ ಅಸೋಸಿಯೇಷನ್" (ಮುಕ್ತವಾಗಿ ಬೆರೆಯುವುದು) ಎಂಬ ವಿಧಾನವನ್ನು ಕಂಡುಹಿಡಿದರು. ಇವೆಲ್ಲವನ್ನೂ ಆಧಾರವಾಗಿಟ್ಟುಕೊಂಡು ಮನೋ ರೋಗಿಗಳ ಚಿಕಿತ್ಸೆಗೆ "ಸೈಕೊ ಆಯನಲಿಸಿಸ್" (ಮನೋ ವಿಶ್ಲೇಷಣೆ) ಎಂಬ ಹೊಸ ವಿಜ್ಞಾನ ಶಾಖೆಯನ್ನೇ ರೂಢಿಗೆ ತಂದರು.


ಕನಸುಗಳ ಬಗ್ಗೆ ಫ್ರಾಯ್ಡ್ ಮಾಡಿದ ಸಂಶೋಧನೆ ಮನೋ ವಿಜ್ಞಾನಕ್ಕೆ ಸಲ್ಲಿಸಿದ ಇನ್ನೊಂದು ದೊಡ್ಡ ಕೊಡುಗೆ. ಜಾಗರತ ಮನಸ್ಸು ನಿದ್ರಿಸುತ್ತಿದ್ದಾಗ ಸುಪ್ತ ಮನಸ್ಸಿನ ಆಶೆಗಳು ಕನಸಿನ ರೂಪದಲ್ಲಿ ಈಡೇರುತ್ತವೆ ಎಂಬುದನ್ನು ಅವರು ಗಮನಕ್ಕೆ ತಂದರು.


ಸಿಗ್ಮಂಡ್ ಫ್ರಾಯ್ಡ್ ಸೆಪ್ಟೆಂಬರ್ ೨೩, ೧೯೩೮ರಂದು ಲಂಡನಿನಲ್ಲಿ ನಿಧನ ಹೊಂದಿದರು. ನಾಜಿಗಳು ಆಸ್ಟ್ರಿಯವನ್ನು ಆಕ್ರಮಿಸಿದ್ದರಿಂದ ಅವರು ಲಂಡನಿನಲ್ಲಿ ನೆಲಸಿದ್ದರು.

 

ಪರಿಷ್ಕರಿಸಿದವರು: ಡಾ. ಎಸ್.ಕೆ. ನಟರಾಜು

 

This page was last modified on 05 December 2009 at 10:33.

ಹೆಚ್ಚಿನ ಮಾಹಿತಿಗಾಗಿ ಅಥವಾ ಸಲಹೆಗಳಿಗಾಗಿ ಕೆಳಗಿನ ಈ ಮೇಲ್ ವಿಳಾಸದಲ್ಲಿ /ದೂರವಾಣಿ ಸಂಖ್ಯೆಯ ಮೂಲಕ ನಮ್ಮನ್ನು ಸಂಪರ್ಕಿಸಿ. projectmanager@kanaja.in | +91.80.2203.3297